ದುಡ್ಡು ಮಾಡೋದು ಹೇಗೆ? ಇಲ್ಲಿವೆ ನೋಡಿ ಸಿಂಪಲ್‌ ಟ್ರಿಕ್ಸ್‌


ದುಡ್ಡು ಯಾರಿಗೆ ತಾನೇ ಬೇಡ ಹೇಳಿ? ಅದ್ರಲ್ಲೂ ದುಡ್ಡು ಮಾಡೋದು ಹೇಗೆ ಎಂಬುದು ಅನೇಕರಿಗೆ ನಿಗೂಢ ರಹಸ್ಯವಾದ್ರೆ,ಕೆಲವರಿಗೆ ಅದೊಂದು ಟ್ರಿಕ್‌ ಅಷ್ಟೇ. ನಿಮಗೂ ಹಣ ಮಾಡೋದು ಕಷ್ಟದ ಕೆಲ್ಸ ಅನಿಸ್ಬಹುದು.ಅದೂ ಈ ಸಂಕಷ್ಟದ ಸಮಯದಲ್ಲಿ ದುಡ್ಡು ಉಳಿಸೋದೆ ದೊಡ್ಡ ಸವಾಲು. ಹೀಗಿರೋವಾಗ ಹಣ ಮಾಡೋದು ಹೇಗೆ ಎಂಬ ಪ್ರಶ್ನೆ ಕಾಡೋದು ಸಹಜ.

ಎಷ್ಟು ಹಣ ಮಾಡ್ಬೇಕು ಎಂಬುದು ಕೂಡ ವ್ಯಕ್ತಿಗತ ವಿಷಯ.ಅವರವರ ಅವಶ್ಯಕತೆ, ಜೀವನಶೈಲಿ, ಬಯಕೆಗಳಿಗೆ ಅನುಗುಣವಾಗಿ ಹಣದ ಮೊತ್ತವೂ ಬದಲಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂತೆ ಹೇಳೋದಾದ್ರೆ ನಿತ್ಯದ ಅವಶ್ಯಕತೆಗಳನ್ನು ಪೂರೈಸೋ ಜೊತೆ ಸಾಲವಿರದೆ ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುವಷ್ಟು ಹಣವಿದ್ರೆ ಸಾಕು.ಆದ್ರೆ ಇಷ್ಟು ಹಣ ಸಂಪಾದಿಸೋದು ಹೇಗೆ?

ಹಣವನ್ನು ಎಚ್ಚರದಿಂದ ಬಳಸಿ
ಕೆಲವರಿಗೆ ಲಕ್ಷಗಟ್ಟಲೆ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಅವರ ಬಳಿ ಪುಡಿಗಾಸೂ ಉಳಿಯಲ್ಲ. ಅದೇ ಕೆಲವರಿಗೆ ಕಡಿಮೆ ವೇತನವಿದ್ರೂ ಎಲ್ಲ ಜವಾಬ್ದಾರಿಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿ ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡುತ್ತಾರೆ. ಇದಕ್ಕೇ ಹೇಳೋದು ವ್ಯಕ್ತಿ ಎಷ್ಟು ದುಡಿಯುತ್ತಾನೆ ಅನ್ನೋದು ಮುಖ್ಯವಲ್ಲ, ಆತ ಎಷ್ಟು ಉಳಿತಾಯ ಮಾಡುತ್ತಾನೆ ಅನ್ನೋದು ಮುಖ್ಯ ಎಂದು.

ಹೀಗಾಗಿ ನಿಮ್ಮ ಆದಾಯ ಅದೆಷ್ಟೇ ಇರಲಿ, ಖರ್ಚು ಮಾಡೋವಾಗ ಪ್ರತಿ ಪೈಸೆಯನ್ನೂ ಲೆಕ್ಕಯಿಡಿ.  ಹೀಗೆ ಮಾಡೋದ್ರಿಂದ ಹಣ ಎಲ್ಲೆಲ್ಲ ಖರ್ಚಾಯಿತು ಎಂಬ ಲೆಕ್ಕ ಸಿಗುತ್ತದೆ. ಜೊತೆಗೆ ಅನಗತ್ಯ ವೆಚ್ಚ ಎಲ್ಲಿ ಆಗುತ್ತಿದೆ ಮತ್ತು ಅದನ್ನು ತಪ್ಪಿಸೋದು ಹೇಗೆ ಎಂಬ ಬಗ್ಗೆ ನೀವು ಪ್ಲ್ಯಾನ್‌ ಮಾಡ್ಬಹುದು. ಇದ್ರಿಂದ ಪ್ರತಿ ತಿಂಗಳು ಉಳಿತಾಯ ಮಾಡಲು ಸಾಧ್ಯವಾಗೋದಷ್ಟೇ ಅಲ್ಲ, ಭವಿಷ್ಯದ ಆರ್ಥಿಕ ಸವಾಲುಗಳನ್ನು ಕೂಡ ಧೈರ್ಯದಿಂದ ಎದುರಿಸಬಹುದು.

ಖರ್ಚು ಆದಾಯವನ್ನು ಮೀರದಿರಲಿ
ಕೈಯಲ್ಲಿ ನಾಲ್ಕು ಕಾಸು ಆಡುತ್ತೆ ಎಂದಾಗ ಕೆಲವರು ಐಷಾರಾಮಿ ಜೀವನಶೈಲಿಗೆ ಹಾತೊರೆಯುತ್ತಾರೆ. ಹಿಂದೆ ಮುಂದೆ ಯೋಚಿಸದೆ ಇರೋ ಹಣವನ್ನೆಲ್ಲ ಅನಗತ್ಯ ವಿಷಯಗಳಿಗೆ ಖರ್ಚು ಮಾಡುತ್ತಾರೆ. ಆದ್ರೆ ಮುಂದೆ ಅನಿರೀಕ್ಷಿತ ಘಟನೆ ಎದುರಾದಾಗ ಕೈಯಲ್ಲಿ ಕಾಸಿಲ್ಲದೆ ತೊಂದರೆ ಅನುಭವಿಸುತ್ತಾರೆ. ಲೆಕ್ಕವಿಲ್ಲದೆ ಖರ್ಚು ಮಾಡಿದ ಪರಿಣಾಮ ಕೊನೆಗೆ ಬೀದಿಗೆ ಬಿದ್ದ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಇದಕ್ಕೆ ಮದ್ಯ ದೊರೆ ವಿಜಯ್‌ ಮಲ್ಯ, ಅನಿಲ್‌ ಅಂಬಾನಿ ಮುಂತಾದ ಉದ್ಯಮ ದಿಗ್ಗಜರೇ ನಿದರ್ಶನ. ಆದಾಯ ಚೆನ್ನಾಗಿದೆ ಎಂದು ಲೆಕ್ಕವಿಡದೆ ಖರ್ಚು ಮಾಡಿದರೆ ಆಪತ್ತು ಗ್ಯಾರಂಟಿ. ಆದಾಯವನ್ನೂ ಮೀರಿದ ಖರ್ಚು ಹಾಗೂ ನಿಮ್ಮ ಹಣವನ್ನು ಹೆಚ್ಚುಗೊಳಿಸದ ಹೂಡಿಕೆ ಎರಡೂ ಭವಿಷ್ಯದಲ್ಲಿ ನಿಮ್ಮನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸುತ್ತವೆ ಎಂಬ ಸರಳ ಹಣಕಾಸಿನ ನಿಯಮವನ್ನು ಸದಾ ನೆನಪಿಟ್ಟುಕೊಳ್ಳಿ.

ವೃದ್ಧಾಪ್ಯದಲ್ಲಿ ರಿಸ್ಕ್‌ ತೆಗೆದುಕೊಳ್ಳಬೇಡಿ
ನಿವೃತ್ತಿ ಬಳಿಕ ಹಣಕಾಸಿಗೆ ಸಂಬಂಧಿಸಿ ರಿಸ್ಕ್‌ ತೆಗೆದುಕೊಳ್ಳೋದು ಒಳ್ಲೆಯದ್ದಲ್ಲ. ಅಮಿತಾಭ್‌ ಬಚ್ಚನ್‌ ಸಿನಿಮಾ ನಿರ್ಮಾಣ ಹಾಗೂ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಸ್ಥಾಪಿಸಿದಾಗ ಅವರಾಗಲೇ ನಿವೃತ್ತಿ ವಯಸ್ಸು ತಲುಪಿದ್ದರು. ಕಂಪನಿಗಾಗಿ ಕೈಯಲ್ಲಿದ್ದ ಹಣವನ್ನೆಲ್ಲ ಕಳೆದುಕೊಂಡರು, ಬ್ಯಾಂಕ್‌ ಸಾಲಗಳನ್ನು ಪಡೆದುಕೊಂಡರು, ಕೊನೆಯಲ್ಲಿ ಸಾಲ ತೀರಿಸಲಾಗದೆ ದಿವಾಳಿಯಾದರು. ಈ ಸಮಯದಲ್ಲಿ ಅವರಿಗೆ 57 ವರ್ಷ, ಕೈಯಲ್ಲಿ ಕಾಸೂ ಇಲ್ಲ, ಯಾವುದೇ ಸಿನಿಮಾಗಳು ಇಲ್ಲ. ಆಗ ಅವರು ಮತ್ತೆ ತಮ್ಮ ಸಿನಿಮಾಗಳು ಹಾಗೂ ಜಾಹೀರಾತುಗಳಿಗೆ ವಾಪಸ್‌ ಆದರು.

ಮತ್ತೆ ವೃತ್ತಿ ಬದುಕನ್ನು ಹೊಸದಾಗಿ ಕಟ್ಟಿಕೊಂಡರು, ಎಲ್ಲ ಸಾಲಗಳನ್ನು ಪಾವತಿಸಿದರು. ಇಂದು ಅವರ ಆಸ್ತಿ ಮೌಲ್ಯ ಸುಮಾರು 2,866 ಕೋಟಿ ರೂ. ನಿವೃತ್ತಿ ವಯಸ್ಸಿನಲ್ಲಿ ಹಣಕಾಸಿನ ವಿಚಾರದಲ್ಲಿ ಅನಗತ್ಯ ರಿಸ್ಕ್‌ ತೆಗೆದುಕೊಳ್ಳಬಾರದು. ಹಾಗೆಯೇ ಆರ್ಥಿಕ ಭದ್ರತೆಯಿಲ್ಲದೆ, ತಜ್ಞರ ಸಲಹೆ ಪಡೆದುಕೊಳ್ಳದೆ ಯಾವುದೇ ಹೂಡಿಕೆಗೆ ಮುಂದಾಗಬಾರದು ಎಂಬುದಕ್ಕೆ ಅಮಿತಾಭ್‌ ಬದುಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹಾಗಂತ ನಿವೃತ್ತಿ ಬಳಿಕ ಹೂಡಿಕೆ ಮಾಡಬಾರದು ಅಂದೇನಿಲ್ಲ, ಉತ್ತಮ ರಿಟರ್ನ್ಸ್‌ ನೀಡೋ ಯೋಜನೆಗಳನ್ನು ತಜ್ಞರ ಸಲಹೆ ಮೇರೆಗೆ ಆರಿಸಿಕೊಂಡು ಹೂಡಿಕೆ ಮಾಡೋದು ಉತ್ತಮ.